ತಾಳಿಕೋಟಿ 18: ಈ ಜಗತ್ತಿಗೆ ಬಂದ ಎಲ್ಲಾ ಮಹಾಪುರುಷರು,ಶರಣರು ಹಾಗೂ ಸೂಫಿ ಸಂತರು ಮಾನವ ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಿದರು. ಅವರೆಂದೂ ಜನರನ್ನು ಜಾತೀಯ ಕಡೆಗೆ ಕರೆಯಲಿಲ್ಲ, ಜಾತಿ ವ್ಯವಸ್ಥೆಯನ್ನು ಕಿತ್ತೊಗಿಯಲಿಕ್ಕಾಗಿಯೇ ಅವರು ಹೋರಾಡಿದರು. ಇಂತಹ ಮಹಾತ್ಮರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಜ್ಯೋತಿಷ್ಯ ರತ್ನ ಪರಮಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬಿಂಜಲಬಾವಿ ಗ್ರಾಮದಲ್ಲಿ ಸೂಫಿ ಸಂತ ಬಿಜನ್ ಸಾಬ ಅವರ ಉರುಸು ಅಂಗವಾಗಿ ಹಮ್ಮಿಕೊಂಡ ಧರ್ಮಸಭೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸೂಫಿ ಸಂತ ಬಿಜನ್ ಸಾಬ ಅವರು ಈ ಭಾಗದಲ್ಲಿ ಭಕ್ತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದರು. ಅವರು ಸರ್ವ ಜಾತಿಯ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಸಮಾರಂಭವನ್ನು ಉದ್ಘಾಟಿಸಿ ಕಲಕೇರಿಯ ಪರಮಪೂಜ್ಯ ಸಿದ್ದರಾಮ ಶಿವಾಚಾರ್ಯರು ಮಾತನಾಡಿ ಶರಣ ಬಿಜನ್ ಸಾಬ ಅವರು ಮಹಾನ್ ಸಂತರಾಗಿದ್ದರು, ಅವರು ಮಾನವ ಕುಲದ ಒಳಿತಿಗಾಗಿ ಕೆಲಸ ಮಾಡಿ ಹೋಗಿದ್ದಾರೆ ಅವರು ನಮಗೆ ಕೊಟ್ಟ ಹೋದ ಆದರ್ಶ ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮದ ಗಣ್ಯರು ಹಿರಿಯರು ಹಾಗೂ ಸಮಾಜದ ಮುಖಂಡರು ಇದ್ದರು.